ಅಸ್ಸಾಂ, ಕೇರಳ ಸೇರಿದಂತೆ ಐದು ರಾಜ್ಯಗಳ ಚುನಾವಣೆ ವೇಳೆ ಬಿಜೆಪಿಗೆ ಬರೋಬ್ಬರಿ 1,473 ಕೋಟಿ ರೂ. ದೇಣಿಗೆ: ಕಾಂಗ್ರೆಸ್‌ಗಿಂತ 7 ಪಟ್ಟು ಹೆಚ್ಚು

ದೆಹಲಿ: ಕಳೆದ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಅವಧಿಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ತನ್ನ ಕೇಂದ್ರ ಪ್ರಧಾನ ಕಚೇರಿಯೊಂದರಲ್ಲೇ ಬರೋಬ್ಬರಿ 1,472.8 ಕೋಟಿ ರೂಪಾಯಿ ನಿಧಿಯನ್ನು ದೇಣಿಗೆಯಾಗಿ ಸಂಗ್ರಹಿಸಿದೆ. ಇದು ಅದೇ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಕೇಂದ್ರ ಹಾಗೂ ರಾಜ್ಯ ಘಟಕಗಳೆಲ್ಲವನ್ನೂ ಸೇರಿಸಿ ಸಂಗ್ರಹಿಸಿದ ಮೊತ್ತಕ್ಕಿಂತ ಏಳು ಪಟ್ಟು ಅಧಿಕ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿರುವ ವೆಚ್ಚದ ವರದಿಗಳು ಬಹಿರಂಗಪಡಿಸಿವೆ.

ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ರಾಜ್ಯಗಳ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಈಗಾಗಲೇ ತನ್ನ ಸಮಗ್ರ ವೆಚ್ಚದ ವರದಿಯನ್ನು ಸಲ್ಲಿಸಿದೆ. ಮಾರ್ಚ್ 15 ರಿಂದ ಮೇ 6 ರವರೆಗಿನ ಚುನಾವಣಾ ಅವಧಿಯಲ್ಲಿ ತನಗೆ 207.17 ಕೋಟಿ ರೂಪಾಯಿ ನಿವ್ವಳ ಆದಾಯ ಬಂದಿದ್ದು, ಪ್ರಚಾರ ಮತ್ತು ಇತರ ಕಾರ್ಯಗಳಿಗಾಗಿ 248.56 ಕೋಟಿ ರೂಪಾಯಿ ವೆಚ್ಚವಾಗಿರುವುದಾಗಿ ಕಾಂಗ್ರೆಸ್ ತಿಳಿಸಿದೆ.

ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಚುನಾವಣಾ ಆಯೋಗ ಬಹಿರಂಗಪಡಿಸಿರುವ ವಿವರಗಳ ಪ್ರಕಾರ ಇದೇ ಅವಧಿಯಲ್ಲಿ ಬಿಜೆಪಿಯ ಕೇಂದ್ರ ಕಚೇರಿಗೆ ಮಾತ್ರವೇ 1,472.8 ಕೋಟಿ ರೂಪಾಯಿ ಸಂದಾಯವಾಗಿದೆ. ಕೇರಳ ಮತ್ತು ಪಶ್ಚಿಮ ಬಂಗಾಳ ಚುನಾವಣೆಗಳಿಗೆ ಸಂಬಂಧಿಸಿದ ಬಿಜೆಪಿಯ ವೆಚ್ಚದ ವರದಿಗಳು ಇನ್ನೂ ಸಾರ್ವಜನಿಕವಾಗಿ ಲಭ್ಯವಾಗಬೇಕಿದ್ದು, ಇವುಗಳ ವಿವರ ಸೇರಿದರೆ ಪಕ್ಷದ ಒಟ್ಟು ಆದಾಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಚುನಾವಣಾ ಪ್ರಕ್ರಿಯೆ ಮುಗಿಯುವ ವೇಳೆಗೆ ಬಿಜೆಪಿಯ ಕೇಂದ್ರ ಕಚೇರಿಯಲ್ಲಿದ್ದ ನಿಧಿಯ ಸಂಗ್ರಹ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಾರ್ಚ್ 15 ರಂದು 6,722.6 ಕೋಟಿ ರೂಪಾಯಿಯಾಗಿದ್ದ ಪಕ್ಷದ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್, ಮೇ 6 ರ ವೇಳೆಗೆ 7,627.2 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅಂದರೆ ಚುನಾವಣಾ ಅವಧಿಯಲ್ಲೇ ಪಕ್ಷದ ನಿಧಿ ಸಂಗ್ರಹವು ಬರೋಬ್ಬರಿ 904.6 ಕೋಟಿ ರೂಪಾಯಿಗಳಷ್ಟು ಹೆಚ್ಚಳ ಕಂಡಿದೆ.

ಇದುವರೆಗೆ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಅಸ್ಸಾಂ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಬಿಜೆಪಿ ಸುಮಾರು 1,597.7 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಇದರಲ್ಲಿ ಸುಮಾರು 130.4 ಕೋಟಿ ರೂಪಾಯಿಯನ್ನು ಪಕ್ಷದ ಸಾಮಾನ್ಯ ಪ್ರಚಾರಕ್ಕಾಗಿ ಹಾಗೂ ಉಳಿದ ಮೊತ್ತವನ್ನು ಅಭ್ಯರ್ಥಿಗಳ ಕಣ ಮತ್ತು ಸಂಬಂಧಿತ ಇತರ ಚುನಾವಣಾ ವೆಚ್ಚಗಳಿಗಾಗಿ ವಿನಿಯೋಗಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು